ಮಾನ್ಯ : ಬೇಳ ವಿಲೇಜು ಕಚೇರಿ ವ್ಯಾಪ್ತಿಯ ಪುದುಕೋಳಿ ಎಂಬಲ್ಲಿ ನೀರ್ಚಾಲು - ಮಾನ್ಯ ರಸ್ತೆಯ ಸಂಕದ ಅಡಿಯಲ್ಲಿ ಬರುವ ಕೊರಂಗ ತೋಡಿಗೆ ಖಾಸಗಿ ವ್ಯಕ್ತಿಯೋರ್ವರ ನೇತೃತ್ವದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಗ್ರಾಮ ಪಂಚಾಯತು ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಅವರು ವಿಲೇಜು ಅಧಿಕಾರಿ, ಗ್ರಾಮ ಪಂಚಾಯತು, ಕಾಸರಗೋಡು ತಹಶೀಲ್ದಾರರು ಎಂಬಿವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಲೇಜ್ ಆಫೀಸರ್, ಬದಿಯಡ್ಕ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿದರು.
ಅನಾದಿ ಕಾಲದಿಂದಲೂ ಮಳೆನೀರು ಹರಿದು ಹೋಗುವ ನೈಸರ್ಗಿಕ ತೋಡು ಇದಾಗಿದೆ, ಈ ತೋಡಿಗೆ ತಲ್ಪನಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದು ಬರುವ ಮಳೆನೀರು ಸೇರುತ್ತದೆ. ಇದರ ಸಮೀಪದ ಕೃಷಿ ಭೂಮಿಗಳಿಗೆ ತೋಡಿನ ನೀರು ಉಪಕಾರಪ್ರದವಾಗಿದೆ.ಆದರೆ, ತೋಡನ್ನ ಮಣ್ಣನ್ನು ತುಂಬಿಸಿ ಮುಚ್ಚಿರುವುದು ಕೃಷಿಕರಿಗೆ ದೊಡ್ಡ ಹೊಡೆತವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಬೇಳ ವಿಲೇಜ್ ಆಫೀಸರ್, ಗ್ರಾಮ ಪಂಚಾಯತು ಅಧ್ಯಕ್ಷರಾದ ಶಂಕರ ಡಿ, ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


