ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 45ನೇ ವಾರ್ಷಿಕೋತ್ಸವ
ಭಜನೆ ಮತ್ತು ಸತ್ಸಂಗಗಳಿಂದ ಸಮಾಜದಲ್ಲಿ ಸಾಮರಸ್ಯ, ಧರ್ಮ ಜಾಗೃತಿ': ಎಡನೀರು ಶ್ರೀಬದಿಯಡ್ಕ: ಭಜನೆ, ಸತ್ಸಂಗ ಹಾಗೂ ಸಾಮೂಹಿಕ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿಭಾವವನ್ನು ಬೆಳೆಸುವುದರ ಜೊತೆಗೆ ಜನರ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಗಟ್ಟಿಗೊಳಿಸುತ್ತವೆ. ಇಂತಹ ಶ್ರದ್ಧಾಕೇಂದ್ರಗಳು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ದಾಟಿಸುವ ದೀವಿಗೆಗಳಾಗಿವೆ ಎಂದು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಅವರು ಮಾವಿನಕಟ್ಟೆ ಶ್ರೀ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ'ದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಅಯ್ಯಪ್ಪ ವ್ರತಾಚರಣೆಯು ಮನುಷ್ಯನಲ್ಲಿ ಶಿಸ್ತು, ಸಂಯಮ ಮತ್ತು ಸಮಾನತೆಯ ಭಾವನೆಯನ್ನು ಮೂಡಿಸುತ್ತದೆ. ಪ್ರತಿಯೊಬ್ಬರೂ ತಮ್ಮ ನಿತ್ಯಜೀವನವನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಮುಂದುವರಿಯಬೇಕು ಎಂದು ಶ್ರೀಗಳು ಭಕ್ತರಿಗೆ ಕರೆ ನೀಡಿದರು.
ಶ್ರೀಮಂದಿರದ ಸೇವಾಸಮಿತಿಯ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಮಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ಎಡನೀರು ಮಠದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ಧಾರ್ಮಿಕ ಮುಖಂಡ ಗೋಪಾಲಕೃಷ್ಣ ಪೈ ಬದಿಯಡ್ಕ, ಮುಳ್ಳೇರಿಯದ ಪ್ರಸಿದ್ಧ ವೈದ್ಯ ಡಾ| ಮನೋಹರ ಎಂ.ಜಿ., ಸಾಮಾಜಿಕ ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಹರಿಪ್ರಸಾದ್ ರೈ ಪುತ್ರಕಳ, ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರದ ಉಪಾಧ್ಯಕ್ಷ ನಿತ್ಯಾನಂದ ನೆಲ್ಲಿತ್ತಲ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಬಾಲಕೃಷ್ಣ ಭಟ್ ಕೋಳಾರಿ, ಜಯಪ್ರಕಾಶ್ ಕೋಳಾರಿ, ವಿಶ್ವನಾಥ ಪೂಜಾರಿ ಮಾಣಿಮೂಲೆ ಇವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಂಜಿತ್ ಕೋಳಾರಿಯಡ್ಕ ಸ್ವಾಗತಿಸಿ, ಕೋಶಾಧಿಕಾರಿ ನಾಗರಾಜ ಪಡುಮೂಲೆ ವಂದಿಸಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.

