ಮೈಸೂರು / ಕಾಸರಗೋಡು : ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನದ ಅಂಗವಾಗಿ ನೀಡಲಾಗುವ ‘ಧ್ವನಿ ಕೊಟ್ಟ ದಣಿ’ ಪ್ರಶಸ್ತಿಗೆ ಗಡಿನಾಡ ಕನ್ನಡಿಗ, ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರು ಆಯ್ಕೆಯಾಗಿದ್ದಾರೆ.
ಸಾಹಿತ್ಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಗಣ್ಯರನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಬಾರಿ ಡಾ. ವಾಮನ್ ರಾವ್ ಬೇಕಲ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆ.26ರಂದು ಬುಧವಾರ ಸಂಜೆ 4.30ಕ್ಕೆ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಡಾ. ವಾಮನ್ ರಾವ್ ಬೇಕಲ್ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಅನ್ವೇಷಣಾ ಸೇವಾ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಟ್ರಸ್ಟ್ನ ಅಧ್ಯಕ್ಷ ಹಾಗೂ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಜಿ.ಆರ್. ಅರಸು ಅವರ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಪತ್ರಿಕಾಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ .

