ಒಂದೇ ಮನಸ್ಸಿನಿಂದ, ಒಂದೇ ತಾಳಕ್ಕೆ ಹೆಜ್ಜೆ ಹಾಕಿ ಹಗ್ಗ ಎಳೆದಾಗ ಮಾತ್ರ ಗೆಲುವು ಸಾಧ್ಯ
ನೀರ್ಚಾಲು ಮಾಡತ್ತಡ್ಕದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಉದ್ಘಾಟಿಸಿ ಬದಿಯಡ್ಕ ಗ್ರಾಪಂ ಅಧ್ಯಕ್ಷ ಡಿ.ಶಂಕರ
ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಆಟ್್ರ್ಸ ಮತ್ತು ಸ್ಪೋಟ್್ರ್ಸ ಕ್ಲಬ್ ನೇತೃತ್ವದಲ್ಲಿ ಮಾಡತ್ತಡ್ಕದಲ್ಲಿ ಹಗ್ಗ ಜಗ್ಗಾಟ ಕಾರ್ಯಕ್ರಮ ಶನಿವಾರ ರಾತ್ರಿ ಜರಗಿತು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಡಿ.ಶಂಕರ ದೀಪಬೆಳಗಿಸಿ ಚಾಲನೆಯನ್ನು ನೀಡಿದರು. ಅವರು ಮಾತನಾಡಿ ಹಗ್ಗಜಗ್ಗಾಟ ಎಂದರೆ ಕೇವಲ ಬಲಪ್ರದರ್ಶನವಲ್ಲ; ಅದು ಒಗ್ಗಟ್ಟು, ತಾಳ್ಮೆ ಮತ್ತು ತಂಡದ ಸ್ಫೂರ್ತಿಯ ಸಂಕೇತವಾಗಿದೆ. ಒಂದು ತಂಡದಲ್ಲಿರುವ ಎಲ್ಲಾ ಆಟಗಾರರು ಒಂದೇ ಮನಸ್ಸಿನಿಂದ, ಒಂದೇ ತಾಳಕ್ಕೆ ಹೆಜ್ಜೆ ಹಾಕಿ ಹಗ್ಗ ಎಳೆದಾಗ ಮಾತ್ರ ಗೆಲುವು ಸಾಧ್ಯ. ನಮ್ಮ ಊರಿನ ಅಭಿವೃದ್ಧಿಗೂ ಇದೇ ರೀತಿಯ ಒಗ್ಗಟ್ಟು ಅತ್ಯಗತ್ಯ. ನಾವೆಲ್ಲರೂ ಒಂದಾಗಿ ಕೈಜೋಡಿಸಿದರೆ ನಮ್ಮ ನಾಡನ್ನು ಮಾದರಿಯಾಗಿ ರೂಪಿಸಲು ಖಂಡಿತ ಸಾಧ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಮಾತನಾಡಿ ನಮ್ಮ ವಾರ್ಡಿನ ಕ್ರಿಯಾಶೀಲ ಯುವಕರ ಸಂಘಟನೆಯಾದ ಹರಿಹರ ಕ್ಲಬ್ ಇಷ್ಟು ಅದ್ಧೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಈ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಿರುವುದಕ್ಕೆ ನಾನು ವಾರ್ಡ್ ಸದಸ್ಯನಾಗಿ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದಿನ ಮೊಬೈಲ್ ಮತ್ತು ಇಂಟರ್ನೆಟ್ ಯುಗದಲ್ಲಿ ನಮ್ಮ ಯುವಜನತೆ ಮೈದಾನದಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ, ನಮ್ಮ ಮಣ್ಣಿನ ಸಾಂಪ್ರದಾಯಿಕ ಕ್ರೀಡೆಯಾದ ಹಗ್ಗಜಗ್ಗಾಟವನ್ನು ಆಯೋಜಿಸಿ ಯುವಕರನ್ನು ಒಂದೆಡೆ ಸೇರಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ.ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳುವುದೇ ನಿಜವಾದ ಕ್ರೀಡಾಪಟುವಿನ ಲಕ್ಷಣ. ಹರಿಹರ ಫ್ರೆಂಡ್ಸ್ ಕ್ಲಬ್ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗದೆ, ಮುಂದೆಯೂ ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದರು. ಶ್ರೀ ಹರಿಹರ ಆಟ್್ರ್ಸ ಮತ್ತು ಸ್ಪೋಟ್್ರ್ಸ ಕ್ಲಬ್ನ ಅಧ್ಯಕ್ಷ ನಾಗೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಹರಿಹರ ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಶಿವ ಭಂಡಾರಿ ಅಣಬೈಲು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸುಜನ್ ಸ್ವಾಗತಿಸಿ, ಸದಸ್ಯ ಹಿತೇಶ್ ಅಣಬೈಲು ವಂದಿಸಿದರು. ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ಸ್ಪರ್ಧೆಗಳಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.


